ಬಲಿ ಚಕ್ರವರ್ತಿಯ ಹತ್ಯೆಯ ಜೊತೆಗೆ ಸಾಂಸ್ಕೃತಿಕ ಹತ್ಯೆಯು ನಡೆದು ಹೋಗಿದೆ

ಬಲಿ ಚಕ್ರವರ್ತಿಯ ಹತ್ಯೆಯ ಜೊತೆಗೆ

ಸಾಂಸ್ಕೃತಿಕ ಹತ್ಯೆಯು ನಡೆದು ಹೋಗಿದೆ

ಹಾರೋಹಳ್ಳಿ ರವೀಂದ್ರ

ಬಲಿ ಚಕ್ರವರ್ತಿಯ ರಾಜ್ಯವು ಮಹಾರಾಷ್ಟ್ರದಿಂದ ಅಯೋಧ್ಯೆವರೆವಿಗೂ ವ್ಯಾಪಿಸಿತ್ತು. ಈತನ ಆಳ್ವಿಕೆಯಲ್ಲಿ ಯಾರಿಗೂ ತೊಂದರೆ ಇರಲಿಲ್ಲ. ಬಲಿಯ ರಾಜ್ಯದಲ್ಲಿ ಯಾರಿಗೂ ದುಃಖವಿರಲಿಲ್ಲ. ಗೂಂಡಾಗಿರಿಗಂತು ಅವಕಾಶವೇ ಇರಲಿಲ್ಲ. ಆದರೆ ವಿದೇಶಿ ದಾಳಿಕೋರರಾದ ಆರ್ಯರು ಇದನ್ನು ಸಹಿಸದೆ ಬಲಿಯನ್ನು ಕೊಂದು ಐತಿಹಾಸಿಕ ಚರಿತ್ರೆಯನ್ನು ಪುರಾಣದೊಳಗೆ ತುರುಕಿ ಮಕ್ಕಳನ್ನು ರಂಜಿಸುವ ಕಥೆಯನ್ನಾಗಿ ಸೃಷ್ಟಿಸಲಾಗಿದೆ. ವಾಮನ ಭಿಕಾರಿಯ ವೇಷದಲ್ಲಿ ಬಂದು ಮೂರು ಹೆಜ್ಜೆ ಭೂಮಿ ಕೇಳಿದನಂತೆ ಬಲಿಯು ಅದಕ್ಕೆ ಸಮ್ಮತಿಸಿದನಂತೆ, ವಾಮನ ಮೂರು ಹೆಜ್ಜೆಯಲ್ಲಿ ಒಂದು ಹೆಜ್ಜೆಯನ್ನು ಭೂಮಿಗೆ ಇಟ್ಟನಂತೆ, ಭೂ ಮಂಡಲವೇ ಆವರಿಸಿಕೊಳ್ಳಿತಂತೆ. ಮತ್ತೊಂದು ಹೆಜ್ಜೆಯನ್ನು ಆಕಾಶಕ್ಕೆ ಇಟ್ಟನಂತೆ, ಆಕಾಸವೇ ಆವರಿಸಿಕೊಳ್ಳಿತಂತೆ. ಮತ್ತೊಂದು ಹೆಜ್ಜೆಯನ್ನು ಎಲ್ಲಿ ಹಿಡುವುದು ಎಂದಾಗ ಬಲಿಯು ನನ್ನ ತಲೆ ಮೇಲಿರಿಸಿ ಎಂದನಂತೆ. ಬಲಿಯ ತಲೆ ಮೇಲೆ ಪಾದವಿಟ್ಟಾಕ್ಷಣ ಬಲಿಯು ಪಾತಾಳಕ್ಕೆ ಹೋದನಂತೆ. ವಾಮನವಿಟ್ಟ ಪಾದ ಭೂಮಿಯನ್ನೆಲ್ಲಾ ಆವರಿಸಿಕೊಂಡಿತೆಂದರೆ ಭೂ ಮಂಡಲದ ಜೀವರಾಶಿಗಳು ಪಾದದ ಕೆಳಗೆ ಸಿಕ್ಕಿ ಯಾವೊಂದು ಜೀವಿಯು ಸಾಯಲಿಲ್ಲವೇ? ಪ್ರಸ್ತುತದಲ್ಲಿ ಸೌರಮಂಡಲದ ಅನ್ವೇಷಣೆಗೆಂದು ಸಾವಿರಾರು ಕೋಟಿ ಖರ್ಚು ಮಾಡಿ ವಿಜ್ಞಾನಿಗಳನ್ನು ಕಳುಹಿಸುತ್ತಿದ್ದಾರೆ. ಅದರ ಬದಲಾಗಿ ಆಕಾಶಕ್ಕೆ ಪಾದವಿಟ್ಟ ವಾಮನ ಪಾದವೇರಿಯೇ ಕಂಡು ಹಿಡಿಯಬಹುದಿತ್ತಲ್ಲ? ಭೂಮಿಗೊಂದು ಕಾಲು, ಆಕಾಶಕ್ಕೊಂದು ಪಾದವಿಡುವ ಮುನ್ನ ವಾಮನ ನಿಂತಿದ್ದ ಜಾಗಯಾವುದು? ಆಕಾಶಕ್ಕೊಂದು ಕಾಲು, ಭೂಮಿಗೊಂದು ಕಾಲಿಟ್ಟಮೇಲೆ, ಮೂರನೇ ಪಾದವನ್ನು ಬಲಿಯ ಮೇಲಿಡಲು ಎಲ್ಲಿಂದ ತಂದ? ಇಷ್ಟೆಲ್ಲಾ ಪ್ರಶ್ನೆಗಳು ಸಹಜವಾಗಿಯೇ ಹುಟ್ಟಿಕೊಳ್ಳುತ್ತವೆ. ಈ ಪ್ರಶ್ನೆಗಳಿಗೆ ಉತ್ತರ ಕೊಡಲು ಅವರಲ್ಲಿ ಯಾವುದೇ ವೈಜ್ಞಾನಿಕ ಕಾರಣಗಳಿಲ್ಲ. ಇತಿಹಾಸವನ್ನು ತಿರುಚಿ ವಿರೂಪಗೊಳಿಸುವುದಷ್ಟೇ ಅವರ ಕಾಯಕವಾಗಿದೆ.

ಕಶ್ಯಪನ ಮಗ ಪ್ರಹ್ಲಾದ, ಪ್ರಹ್ಲಾದನ ಮಗ ವಿರೋಚನ. ಈ ವಿರೋಚನನ ಮಗನೇ ಬಲಿ. ಕಶ್ಯಪನನ್ನು ಮೋಸದಿಂದ ಕೊಂದರು. ಬಲಿರಾಜನ ತಾತ ಪ್ರಹ್ಲಾದನನ್ನು ವಂಚಿಸಿ ತಂದೆಯ ವಿರುದ್ಧವೇ ಎತ್ತಿಕಟ್ಟಿ ತಮ್ಮ ಕೈವಶ ಮಾಡಿಕೊಂಡಿದ್ದರು. ಅನಂತರ ಇವರ ಎಲ್ಲಾ ನಯವಂಚನೆಯ ಬುದ್ಧಿ ಅರ್ಥವಾಗಿ ಆರ್ಯ ಸಂಸ್ಕೃತಿಯನ್ನು ವರ್ಜಿಸಿ ಮುಂದೆ ಬೌದ್ಧ ಉಪಾಸಕನಾದ. ವಿರೋಚನನು ಮತ್ತು ಬಲಿಯು ಕೂಡ ಆರ್ಯ ಸಂಸ್ಕೃತಿಯ ವಿರೋಧಿಗಳೇ ಆಗಿದ್ದರೂ. ವಿರೋಚನನ ನಂತರ ಸಾಮ್ರಾಜ್ಯ ಬಲಿಯ ಕೈಗೆ ಬಂತು. ಈತನ ಆಳ್ವಿಕೆಯನ್ನು ಹೇಗಾದರು ಮಾಡಿ ಕಸಿದುಕೊಳ್ಳಬೇಕೆಂದು ವಾಮನ ತನ್ನ ಸೇನೆಯನ್ನು ಕೂಡಿಕೊಂಡು ಬಲಿಯ ರಾಜ್ಯಕ್ಕೆ ನುಗ್ಗಿ, ರಾಜಧಾನಿಯ ಸಮೀಪದಲ್ಲಿ ಬೀಡುಬಿಟ್ಟಿದ್ದ. ಬಲಿಗೆ ವಾಮನ ಮಾಡಿದ ಅನಿರೀಕ್ಷಿತ ದಾಳಿಯ ಕಲ್ಪನೆ ಇಲ್ಲವಾದ್ದರಿಂದ ಅಲ್ಪ ಸೈನ್ಯದೊಡನೆಯೆ ಹೋರಾಡಿದ. ಆತನಿಗೆ ತಮ್ಮ ಸಾಮ್ರಜ್ಯದಾಧ್ಯಂತ ಯುದ್ಧದ ಸಲುವಾಗಿ ಸೈನ್ಯ ಕರೆಸುವಷ್ಟು ಸಮಯವೂ ಇರಲಿಲ್ಲ. ವಾಮನೊಡನೆ ಯುದ್ದ ನಡೆದು ಬಲಿರಾಜ ಹತನಾದ. ಬಾಣಾಸುರ ವಾಮನನ್ನು ಹತ್ತಿಕ್ಕಲು ಸಾಕಷ್ಟು ಸಾಹಸ ಮಾಡಿದರು ಸಾಧ್ಯವಾಗದೇ ಸೈನ್ಯದೊಡನೆ ವಾಪಸ್ಸು ಮರಳಿಬಿಟ್ಟ. ಬಾಣಾಸುರ ಬರುವಷ್ಟರಲ್ಲಿ ಎರಡನೇ ಬಲಿಗೆ ಅಧಿಕಾರವಹಿಸಿ ಸಾಮ್ರಾಜ್ಯದಲ್ಲಿನ ಸಮಸ್ತ ಜನರು ‘ದ್ವಿಜರ ಅಧಿಕಾರ ಹೋಗಬೇಕು ಬಲಿಯ ರಾಜ್ಯ ಬರಬೇಕು’ ಎಂದು ದೀಪ ಹಚ್ಚಿದ್ದರು.  ಆ ದಿವಸದಿಂದ ಇಂದಿಗೂ ನಮ್ಮ ನೆಲಮೂಲರು ದೀಪ ಹಚ್ಚುತ್ತಲೇ ಇದ್ದಾರೆ.

ಬಲಿರಾಜನ ಸರದಾರರಿಗೆಲ್ಲಾ ಈ ವಿಷಯ ತಿಳಿದು ಬಾಣಾಸುರನ ಬಳಿ ಬಂದರು. ಈ ವಿಷಯ ತಿಳಿದ ಆರ್ಯರು ಜೀವ ಕೈಲಿ ಹಿಡಿದುಕೊಳ್ಳಲು ಪ್ರಾರಂಭಿಸಿದರು. ಎಲ್ಲಾ ಸೈನ್ಯವನ್ನು ತೆಗೆದುಕೊಂಡು ಹೋದ ಬಾಣಾಸುರ ವಾಮನನ್ನು ಅವನ ಸೈನ್ಯದ ಸಮೇತ ಧೂಳಿಪಟ ಮಾಡಿದನು. ಅನಂತರ ವಾಮನ ಅಪಮಾನಿತನಾಗಿ ಹಿಮಾಲಯ ಪರ್ವತಕ್ಕೆ ಓಡಿಹೋದ. ಇದಾದ ಬಳಿಕ ಅಬಾಲವೃದ್ಧ ಸ್ತ್ರೀಯರಿಗೆ ಅಪಾರ ಆನಂದವಾಗಿ ಕಾರ್ತೀಕ ಶುದ್ಧ ದ್ವಿತೀಯದಂದು ತಮ್ಮ ಬಾಂಧುಬಾಂಧವರನ್ನು ಕರೆಯಿಸಿ ಯಥಾಪ್ರಕಾರ ಭೋಜನಾ ಕೂಟ ಏರ್ಪಡಿಸಿ ಆರತಿ ಮಾಡಿ ದೀಪಗಳನ್ನೆಲ್ಲಾ ಹಚ್ಚುವ ಮೂಲಕ ‘ಇಡಾಪೀಡಾ ಹೋಗಲಿ ಬಲಿರಾಜ್ಯ ಬರಲಿ’ ಎಂದು ಬಲಿರಾಜನನ್ನು ನೆನೆಯುತ್ತಾರೆ. ‘ಡಾ.ಬಿ.ಆರ್.ಅಂಬೇಡ್ಕರ್ ಅವರ ಬರಹ ಮತ್ತು ಭಾಷಣಗಳು- ಸಂಪುಟ 21’ ಕನ್ನಡ ಸಂಸ್ಕೃತಿ ಇಲಾಖೆ ತಂದಿರುವ 2015ರ ಪರಿಷ್ಕೃತ ಮುದ್ರಣದಲ್ಲಿ  ಪದ್ಮಪುರಾಣದಲ್ಲಿನ ಬಲಿಯ ವಿಷಯವನ್ನು ಹೀಗೆ ಪ್ರಸ್ತಾಪಿಸಿದ್ದಾರೆ.

ಬಲಿನಾಮ ಮಹಾದೈತ್ಯೋ ದೇವಾರಿರಪರಾಜಿತಃ

ಧರ್ಮೇಣ ಯಶ ಸಾಚೈವ ಪ್ರಜಾ ಸಂರಕ್ಷಣೇ ಚ

ತಸ್ಮಿನ್ ಶಾಸತಿ ರಾಜ್ಯಂ ತು ತ್ರೈಲೋಕ್ಯ ಹತಕಷ್ಟಕಮ್

ನಾರಯೋ ವ್ಯಾಧಯೋಪಾಡಪಿ ನಾಧಯೋಯಾ ಕಥಂ ಚ ನ

ಅನಾವೃಷ್ಟಿಧಮರ್ೋ ವಾ ನಾಸ್ತಿ ಶಬ್ದೋ ನ ದುರ್ಜನಃ

ಸ್ವಸ್ನೇ ಪಿ ನೈವ ಧೃಶ್ಯತೇ ಬಲೌ ರಾಜ್ಯ ಪ್ರಶಾಸತಿ

ಮೇಲಿನ ಪದ್ಮಪುರಾಣದ ಉಲ್ಲೇಖದ ಅರ್ಥ ಹೀಗಿದೆ : ಬಲಿ ಹೆಸರಿನ ಮಹಾದೈತ್ಯ ದೇವರ ಶತ್ರುವಾಗಿ ಅಪರಾಜೇಯನಾಗಿದ್ದ. ಧರ್ಮ ಯಶ ಮತ್ತು ಪ್ರಜೆಗಳ ರಕ್ಷಣೆಯಲ್ಲಿ ಅವನು ಅತ್ಯಂತ ತರ್ಕಬದ್ಧವಾಗಿದ್ದ. ಬಲಿಯ ರಾಜ್ಯದಲ್ಲಿ ಯಾರಿಗೂ ದುಃಖವಿರಲಿಲ್ಲ, ಯಾರು ಯಾರಿಗೂ ಶತ್ರುವಾಗಿರಲಿಲ್ಲ. ಯಾರಿಗೂ ಯಾವ ಚಿಂತೆಯೂ ಇರಲಿಲ್ಲ. ಅವನ ಆಡಳಿತ ಕಾಲದಲ್ಲಿ ಜನರ ದುಃಖ ಕಷ್ಟ ದೂರವಾಗಿತ್ತು. ಅವನ ರಾಜ್ಯದಲ್ಲಿ ನೀರಿನ ಕೊರತೆ ಇರಲಿಲ್ಲ. ಗೂಂಡಾಗಿರಿ, ಹಠಮಾರಿತನ ಇರಲಿಲ್ಲ. ಮತ್ತು ಕನಸಿನಲ್ಲಿಯೂ ಸಹ ಅಂಥವರು ಕಾಣಿಸುತ್ತಿರಲಿಲ್ಲ.

ಡಾ.ಬಿ.ಆರ್.ಅಂಬೇಡ್ಕರ್ ಅವರ ಉಲ್ಲೇಖವನ್ನು ಗಮನಿಸಿದರೆ ಬಲಿ ರಾಜ್ಯವು ಎಂತಹ ಪ್ರಜಾಪ್ರಭುತ್ವ ಮಾದರಿಯನ್ನು ಒಳಗೊಂಡಿತ್ತು ಎಂಬುದು ಸ್ಪಷ್ಟವಾಗುತ್ತದೆ. ಆದರೆ ವೈದಿಕರು ಇಂತಹ ಬಹುದೊಡ್ಡ ಚರಿತ್ರೆಯನ್ನು ವಿರೂಪಗೊಳಿಸಿದ್ದಾರೆ. ಬಲಿ ಚಕ್ರವತರ್ಿಯ ವಂಶಾವಳಿಯ ಪರಂಪರೆಯು ಮೂಲತಹ ಬೌದ್ಧ ಪರಂಪರೆಯನ್ನು ಸಾರಿಕೊಂಡು ಬಂದವರು. ಬೌದ್ಧರ ಈ ಪರಂಪರೆಯನ್ನು ನಾಶ ಮಾಡಲೆಂದೆ ಚರಿತ್ರೆಯನ್ನೆಲ್ಲಾ ವಿರೂಪಗೊಳಿಸಿ ಇವರನ್ನು ಜನರು ನೆನೆಯಬಾರದು ಬೌದ್ಧ ಚರಿತ್ರೆ ತಿಳಿಯಬಾರದೆಂದು ಹೀಗೆ ವ್ಯವಸ್ಥಿತವಾಗಿ ಹತ್ತಿಕ್ಕಲಾಗಿದೆ. ಭಗವಾನ್ ಬುದ್ಧರ ಪೂರ್ವ ಚರಿತ್ರೆ ಹಾಗೂ ಬುದ್ಧರ ನಂತರದ ಚರಿತ್ರೆ ಎರಡನ್ನು ವಿರೂಪಗೊಳಿಸಲಾಗಿದೆ. ಭಗವಾನ್ ಬುದ್ಧರಿಗೂ ಹಿಂದೆ ಬೌದ್ಧ ಪರಂಪರೆ ಅಸ್ಥಿತ್ವದಲ್ಲಿತ್ತು. 1911 ರಲ್ಲಿ ಆರ್.ಡಿ. ಬ್ಯಾನರ್ಜಿಯವರು ಸಿಂಧೂ ಬಯಲಿನ ಹರಪ್ಪ ಮತ್ತು ಮಹೆಂಜೊದಾರೊಗಳಲ್ಲಿ ಭೂ ಉತ್ಕನನ ಮಾಡುವಾಗ ಸಿಕ್ಕ ಚಕ್ರ ಮತ್ತು ಪಶುಪತಿನಾಥನ ಕೆತ್ತನೆಗಳು ಬೌದ್ಧ ಸಂಸ್ಕೃತಿಯನ್ನು ಬಿಂಬಿಸುತ್ತವೆ. ಬುದ್ಧರು ಬರುವ ಮುನ್ನವೇ ಹಿಂದೆ ಈ ಸಂಸ್ಕೃತಿ ಇತ್ತು ಎಂದು ಅಭಿಪ್ರಾಯ ಪಡುತ್ತಾರೆ. ಪ್ರತಾಪ್ ಚೆಟ್ಸೆ ಅವರ ಇಂಗ್ಲೀಷ್ ಮೂಲ ಕೃತಿಯಾದ ‘ದ ರೆವ್ಯುಲುಷನರಿ ಬುದ್ಧ’ ಕೃತಿಯನ್ನು ‘ಕ್ರಾಂತಿಕಾರಿ ಬುದ್ಧ’ಎಂದು ಲೇಖಕ ಹಾಗೂ ಪತ್ರಕರ್ತ ರವಿಂದ್ರ ಸುಂಟನಕರ  Ravindra N S ಕನ್ನಡಕ್ಕೆ ಅನುವಾದಿಸುತ್ತಿದ್ದಾರೆ. ಈ ಕೃತಿಯಲ್ಲು ಸಹ ಬುದ್ಧರು ನಾನೆ ಮೊದಲಲ್ಲ ನಾನು 28ನೇಯವನು. ನನಗಿಂತ ಹಿಂದೆಯೇ ಪಶುಪತಿನಾಥ, ಚಕ್ರವಾಕ, ಬಾವಲಿ, ಪ್ರಹ್ಲಾದ, ವಿರೋಚನಾ ಮುಂತಾದ ಬೌದ್ಧ ತತ್ವಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರದಲ್ಲಿ ನಿರಂತರ ಅಧ್ಯಯನಕಾರರಾಗಿದ್ದರು. ಅವರ ತತ್ವಶಾಸ್ತ್ರ ಮತ್ತು ಸಂಖ್ಯಾಶಾತ್ರವನ್ನು ನಾನು ಕೂಡ ಅಳವಡಿಸಿಕೊಂಡಿದ್ದೇನೆ ಹಾಗಾಗಿ ನಾನು 28ನೇ ಬುದ್ಧ ಎಂದು ಕರೆದುಕೊಂಡಿರುವುದು ಕ್ರಾಂತಿಕಾರಿ ಬುದ್ಧ ಪುಸ್ತಕದಲ್ಲಿ ದಾಖಲಾಗಿದೆ.

ಬುದ್ಧ ಎನ್ನುವ ಪದ ಹೆಸರಲ್ಲ ಅದೊಂದು ಡಿಸಿಗ್ನೇಶನ್. ಕಾಲಾನಂತರದಲ್ಲಿ ಅದು ಹೆಸರಿನ ಸ್ವರೂಪ ಪಡೆದುಕೊಂಡಿದೆ. ಬುದ್ಧ ಪೂರ್ವ ಮತ್ತು ಭಗವಾನ್ ಬುದ್ಧರ ನಂತರ ಚರಿತ್ರೆಯನ್ನು ಎರಡು ರೀತಿಯಲ್ಲಿ ವಿರೂಪಗೊಳಿಸಲಾಗಿದೆ. ಭಗವಾನ್ ಬುದ್ಧರ ಪೂರ್ವದಲ್ಲಿ ಬರುವ ಬಲಿ ಚಕ್ರವರ್ತಿಯ ವಂಶಜರು ಮೂಲತಹ ಬೌದ್ಧ ಪ್ರತಿಪಾದಕರಾಗಿದ್ದು ಅವರನ್ನು ಪುರಾಣಗಳಲ್ಲಿ ಬರೆದುಕೊಂಡು ಹಿಂದೂಕರಣ ಮಾಡಿಕೊಳ್ಳಲಾಗಿದೆ ಜೊತೆಗೆ ಅವರನ್ನು ದುಷ್ಟರು ಎಂಬಂತೆ ಬಿಂಬಿಸಲಾಗಿದೆ. ಭಗವಾನ್ ಬುದ್ಧರ ಅನಂತರದ ಚರಿತ್ರೆಯನ್ನು ಮೂಲಭಾಷೆಗೆ ಬರೆಯದೆ ಸಂಸ್ಕೃತದಲ್ಲಿ ಬರೆದುಕೊಂಡು ಅದನ್ನು ಮೂಲನಿವಾಸಿಗಳು ಓದಿ ತಿಳಿದುಕೊಳ್ಳದ ರೀತಿಯಲ್ಲಿ ಬಂಧಿಸಲಾಗಿದೆ. ಒಂದು ವೇಳೆ ಓದಿದರು ಸಹಿತ ಬುದ್ಧರ ನಿಜವಾದ ಚರಿತ್ರೆಯು ಜನರ ಕೈಗೆ ಸಿಗದಂತೆ ಮಾಡಲಾಗಿದೆ.  ಈ ರೀತಿ ಮಾಡಿದವರಲ್ಲಿ ಮೊದಲಿಗರು ಬ್ರಾಹ್ಮಣ ಲೇಖಕ ಅಶ್ವಘೋಷ ‘ಬುದ್ಧಚರಿತಂ’ ಬರೆಯುವ ಮೂಲಕ ಬೌದ್ಧ ಸಂಸ್ಕೃತಿ ಹಾಗೂ ಬುದ್ಧರ ನಿಜವದ ಬೊಧನೆಗಳನ್ನು ವಿರೂಪಗೊಳಿಸಿದ್ದಾರೆ ಎಂದು ‘ದ ರೆವ್ಯುಲುಷನರಿ ಬುದ್ಧ’ ಕನ್ನಡಾನುವಾದ ‘ಕ್ರಾಂತಿಕಾರಿ ಬುದ್ಧ’ ಕೃತಿಯಲ್ಲಿ ನಾವು ಬುದ್ಧರ ಚಿಂತನೆಗಳನ್ನು ಹೇಗೆ ಹತ್ಯೆ ಮಾಡಲಾಗಿದೆ ಎಂಬುದನ್ನು ತಿಳಿದುಕೊಳ್ಳಬಹುದು.

ಬೌದ್ಧ ಸಂಸ್ಕೃತಿ ಮತ್ತು ಜೀವನ ಕ್ರಮ ವೈಜ್ಞಾನಿಕವಗಿದ್ದು ಯಾವುದೇ ಮೌಢ್ಯವನ್ನು ಬೆಂಬಲಿಸಿಲ್ಲ. ಆದರೆ ವಿಪ್ರರು ಬೌದ್ಧ ಚರಿತ್ರೆಯನ್ನು ಧ್ವಂಸಗೊಳಿಸಿದ್ದಾರೆ. ಬುದ್ಧರ ಪೂರ್ವದಲ್ಲಿನ ಪಶುಪತಿನಾಥ, ಚಕ್ರವಾಕ, ಬಾವಲಿ, ಪ್ರಹ್ಲಾದ ಮತ್ತು ವಿರೋಚನರಂತಹ ಮಹಾನ್ ಬೌದ್ಧರನ್ನು ಅವರ ತಾತ್ವಿಕತೆಯನ್ನು ಪೌರಾಣಿಕಗೊಳಿಸಿ ಜನರನ್ನು ಧಿಕ್ಕು ತಪ್ಪಿಸಿದ್ದಾರೆ. ಬಲಿಯನ್ನು ಕೊಲ್ಲುವ ಮೂಲಕ ಬೌದ್ಧ ಸಂಸ್ಕೃತಿ ಬಿಂಬವನ್ನು ಅಳಿಸಲಾಗಿದೆ. ಭಗವಾನ್ ಬುದ್ಧರ ಮರಣದ ನಂತರ ಸಾಹಿತ್ಯಾತ್ಮಕ ಚರಿತ್ರೆಯನ್ನು ಭಗ್ನಗೊಳಿಸಲಾಗಿದೆ. ಈ ಮೂಲಕ ಎರಡು ರೀತಿಯ ಸಾಂಸ್ಕತಿಕ ಹತ್ಯೆಯನ್ನು ವೈದಿಕರು ಬಹಳ ಕುತಂತ್ರದಿಂದ ಮಾಡಿದ್ದರೆ. ಇನ್ನು ಮುಂದಾದರು ನಮ್ಮ ಚರಿತ್ರೆಯನ್ನು ಮತ್ತೆ ಪುನರುತ್ಥಾನಗೊಳಿಸಿಕೊಳ್ಳುವ ಕಡೆ ನಾವು ಹೆಜ್ಜೆಯನ್ನಿಡಬೇಕಿದೆ.


2 thoughts on “ಬಲಿ ಚಕ್ರವರ್ತಿಯ ಹತ್ಯೆಯ ಜೊತೆಗೆ ಸಾಂಸ್ಕೃತಿಕ ಹತ್ಯೆಯು ನಡೆದು ಹೋಗಿದೆ

Leave a Reply

Back To Top